Nooru Devaranella

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ ||

ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು ।। ಭಾರತಾಂಬೆಯೇ ।।

ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿನ್ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿನ್ ನುಡಿದು ।। ಭಾರತಾಂಬೆಯೇ ।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಒಯ್ದು
ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು ।। ಭಾರತಾಂಬೆಯೇ ।।



Credits
Writer(s): Kuvempu, C. Ashwath
Lyrics powered by www.musixmatch.com

Link